ಭಗವನ್‍ಲಾಲ, ಇಂದ್ರಜಿ
1839-88. ಪ್ರಸಿದ್ಧ ಶಾಸನತಜ್ಞ ಮತ್ತು ಸಂಶೋಧಕ. ಗುಜರಾತ್ ರಾಜ್ಯದ ಜುನಾಗಢದಲ್ಲಿ ಹುಟ್ಟಿದ್ದು. ಇವರಿಗಿದ್ದ ಇತಿಹಾಸ ಮತ್ತು ಸಂಸ್ಕøತ ವಿಷಯಗಳಲ್ಲಿಯ ಪಾಂಡಿತ್ಯ ಹಾಗೂ ಸಂಶೋಧನಾ ಪ್ರವೃತ್ತಿ ಇವರಿಗೆ ಭಾವುದಾಜಿ, ಬೂಲರ್, ಬರ್ಜೆಸ್ ಮೊದಲಾದ ಶ್ರೇಷ್ಠ ಇತಿಹಾಸ ತಜ್ಞರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಡಲು ಸಹಾಯಕವಾದುವು. ಇವರು ಗುಜರಾತಿನಲ್ಲಿ ಬರೆದ ಸಂಶೋಧಕ ಲೇಖನಗಳನ್ನು ಬರ್ಜೆಸ್‍ರಂಥವರು ಇಂಗ್ಲಿಷಿಗೆ ಭಾಷಾಂತರಿಸಿ ಅವುಗಳ ಮಹತ್ತ್ವವನ್ನು ಪಾಶ್ಚ್ಯಾತ್ಯರಿಗೆ ಮನನ ಮಾಡಿಕೊಟ್ಟರು. ಇವರ ಪಾಂಡಿತ್ಯಕ್ಕೆ ಮೆಚ್ಚಿ ಹಾಲೆಂಡಿನ ಲೇಡನ್ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ದಯಪಾಲಿಸಿತು. ಅಲ್ಲದೆ ಬ್ರಿಟನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿ ಇವರನ್ನು ತನ್ನ ಗೌರವ ಸದಸ್ಯನಾಗಿ ಮಾಡಿಕೊಂಡಿತು.

	ಇಂದ್ರಜಿಯವರು ರಜಪುತಾಣ, ಕಾಥೇವಾಡ, ಗುಜರಾತು, ಮುಂಬಯಿ ಮಧ್ಯಭಾರತ ಸಂಯುಕ್ತಪ್ರಾಂತ, ಪಂಜಾಬ್ ಮುಂತಾದ ಪ್ರಾಂತ್ಯಗಳ ಮತ್ತು ನೇಪಾಳದಲ್ಲಿ ಸಂಚರಿಸಿ ಅನೇಕ ಶಿಲಾಶಾಸನ, ತಾಮ್ರಶಾಸನಗಳನ್ನು ನಾಣ್ಯಗಳನ್ನು ಮತ್ತು ಹಸ್ತಲಿಖಿತ ಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಬಗೆಗೆ ಐತಿಹಾಸಿಕ, ಧಾರ್ಮಿಕ ಹಾಗೂ ಸಾಮಾಜಿಕ ಟಿಪ್ಪಣಿಗಳನ್ನು ಬರೆದಿದ್ದಾರೆ. ಮಹಾರ, ಕುಡ, ಭಾಜೌ, ಬೆಡ್ಸಾ, ಕಾರ್ಲಾ, ಪಿತಲ್ಕೋರಾ, ಕಂಚೇರಿ, ಅಜಂತಾ ಮತ್ತು ಎಲ್ಲೋರಾ ಗುಹೆಗಳಿಗೆ ಭೇಟಿಕೊಟ್ಟು ಅವುಗಳಲ್ಲಿಯ ಶಾಸನಗಳನ್ನು ಅಧ್ಯಯನ ಮಾಡಿದುದರ ಫಲವಾಗಿ ಇನ್‍ಸ್ಕ್ರಿಪ್ಷನ್ಸ್ ಆಫ್ ದಿ ಕೇವ್ ಟೆಂಪಲ್ಸ್ ಆಫ್ ವೆಸ್ಟರ್ನ್ ಇಂಡಿಯ ಎಂಬ ಗ್ರಂಥ ಹೊರಬಂತು. ಈ ಗ್ರಂಥದಲ್ಲಿರುವ ಶಾಸನಗಳ ಟೀಕೆ, ಟಿಪ್ಪಣಿಗಳನ್ನು ಬರ್ಜೆಸರು ಇಂಗ್ಲಿಷಿಗೆ ಭಾಷಾಂತರಿಸಿರುವರು.

	ಭಗವನ್‍ಲಾಲರು ತಮ್ಮ ಊರ ಹತ್ತಿರವೇ ಇದ್ದ ಗುಡ್ಡಗಳ ಸೃಷ್ಟಿ ಸೌಂದರ್ಯಕ್ಕೆ ಮನಸೋತಿದ್ದರು. ಅಲ್ಲಿಯ ಅಶೋಕ ಮಹಾರಾಜನ ಧರ್ಮ ಶಾಸನವನ್ನು ಇವರು ಪುನಃ ಮುದ್ರಿಸಿಕೊಂಡು ಕಲ್ಸಿ ಮತ್ತು ಶಹಬಜ್‍ಗರ್ಹಿಗಳ ಧರ್ಮಶಾಸನಗಳ ಸಹಾಯದಿಂದ ಹೆಚ್ಚಿನ ಅಭ್ಯಾಸ ಮಾಡಿದರು.

	ಕಂಚೇರಿ ಗುಹಾಂತರ್ದೇವಾಲಯದ ಒಂದು ಶಾಸನದಿಂದ ಕೃಷ್ಣಗಿರಿಯಲ್ಲಿ (ಈಗಿನ ಕನ್ಹೇರಿ) ವಿಹಾರವಿತ್ತೆಂದು ಅಲ್ಲಿ ತ್ರಿಕೂಟರು ಆಳ್ಮತ್ತಿದ್ದರೆಂದು ಸಿದ್ದಪಡಿಸಿದರು; ಕಾಳಿದಾಸನ ರಘುವಂಶ ಕಾವ್ಯದ ಸಹಾಯದಿಂದ ರಘುರಾಜ ಕೊಂಕಣದಲ್ಲಿ ತ್ರಿಕೂಟವೆಂಬ ನಗರವನ್ನು ಕಟ್ಟಿದನೆಂದು ತೋರಿಸಿಕೊಟ್ಟರು. ಪ್ರಾಚೀನ ಶಾಸನಾರರಭದಲ್ಲಿ ಬರುವ ಸಿದ್ಧಂ ಶಬ್ಧ ಓಂ ನಮಃ ಸಿದ್ಧಾಯ ಎಂಬುದರ ಸಂಕ್ಷಿಪ್ತರೂಪವೆಂದೂ ಅದನ್ನು ಬೌದ್ಧರಂತೆ ಜೈನರೂ ವೈದಿಕ ಸಂಪ್ರದಾಯದವರೂ ಬಳಸಲು ತೊಡಗಿದರೆಂದು ಹೇಳಿದರು. ಗಿರ್ನಾರ್ ಗುಡ್ಡದ ಹತ್ತರವಿದ್ದ ಸುದರ್ಶನ ಸರೋವರ ರುದ್ರದಾಮನ ಕಾಲದಲ್ಲಿ ಮಹಾಪೂರರಿಂದ ಒಡೆದು ದುರ್ದರ್ಶನವಾಯಿತೆಂದು ಬೂಲರ್ ಅವರೊಂದಿಗೆ ಶಾಸನದ ಸಹಾಯದಿಂದ ವಿಸದಪಡಿಸಿದರು; ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಮೊದಲು ನಂದಿಗೆ ಅನಂತರ ಚಂದ್ರನಿಗೆ ನಮಸ್ಕರಿಸಿ ಪ್ರದಕ್ಷಿಣೆ ಹಾಕಿ ಗರ್ಭಾಲಯದ ದೇವರಿಗೆ ನಮಸ್ಕರಿಸಬೇಕೆಂದು ಸೂಚಿಸಿದರು; ಚಂದ್ರನ ಬದಲು ತಮಿಳು ನಾಡಿನಲ್ಲಿ ಚಂಡೇಶನ ಮೂರ್ತಿಗೆ ನಮಸ್ಕರಿಸುವ ಪದ್ಧತಿ ಇರುವುದೆಂದು ಅಭಿಪ್ರಾಯಪಟ್ಟರು. ನಾಗರಿಯಲ್ಲಿ 1ರಿಂದ 9ರ ವರೆಗೆ, 100ರಿಂದ 900ರ ವರೆಗೆ ಮತ್ತು ಸಾವಿರ ಇವನ್ನು ಬರೆಯಲು ನಾಲ್ಕು ಪ್ರಕಾರದ ಸಂಖ್ಯೆಗಳನ್ನು ಶಾಸನಗಳಲ್ಲಿ ಉಪಯೋಗಿಸುತ್ತಿದ್ದರೆಂದು ತೋರಿಸಿದರು. ನೇಪಾಳದ ಪ್ರಾಚೀನ ಇತಿಹಾಸಕ್ಕೆ ಅಸ್ತಿಭಾರವಾದ 23 ಶಾಸನಗಳನ್ನು ಸಂಗ್ರಹಿಸಿದರು. 									
 (ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ